ಅಣುಬಟ್ಟಿ ಇಳಿಸುವ ವಿಧಾನ (ಅಣುಭಟ್ಟೀಕರಣ)
	
ಸಂಯುಕ್ತವಸ್ತುಗಳನ್ನು ಅಧಿಕ ಶೂನ್ಯತೆ ಮತ್ತು ಕಡಿಮೆ ಉಷ್ಣತೆಯ ಮಟ್ಟದಲ್ಲಿ ಭಟ್ಟಿ ಇಳಿಸುವ ಕ್ರಮವಿದು (ಮೊಲೆಕ್ಯುಲರ್ ಡಿಸ್ಟಿಲೇಷನ್).  ಹೀಗೆ ಮಾಡುವಾಗ ವಸ್ತುವಿನ ರಚನೆ ಮತ್ತು ಸ್ವರೂಪಕ್ಕೆ ಅಪಾಯ ಸಂಭವಿಸದಂತೆ ಎಚ್ಚರವಹಿಸಲಾಗುವುದು.  ಈ ಪದ್ಧತಿಯಲ್ಲಿ ದ್ರವೀಕರಿಸುವ ಮೇಲ್ಮೈ ಬಟ್ಟಿ ಇಳಿಸಲಾಗುವ ದ್ರವಕ್ಕೆ (ಡಿಸ್ಟಿಲೆಂಡ್) ಸಾಧ್ಯವಾದ ಮಟ್ಟಿಗೆ ಸಮೀಪದಲ್ಲಿರುವಂತೆ ಮಾಡಲಾಗುವುದು.  ಇದರಿಂದಾಗಿ ನಿರ್ಗಮಿಸುವ ಅಣಗಳು ಒಂದಕ್ಕೊಂದು ಡಿಕ್ಕಿ ಹೊಡಿದು ಮತ್ತೆ ದ್ರವ ರೂಪಕ್ಕೆ ಹಿಂದಿರುಗುವುದಕ್ಕೆ ಬದಲಾಗಿ ಸಾಂದ್ರಕ (ಕಂಡೆನ್ಸರ್) ಮುಖಾಂತರ ಜಾಡಿಯನ್ನು ಪ್ರವೇಶಿಸುತ್ತವೆ. 
	
ಅಣುಭಟ್ಟಿ ಇಳಿಸುವುದಕ್ಕೆ ಉಪಯೋಗಿಸುವ ಸಲಕರಣೆಗೆ ಮೊಲೆಕ್ಯೂಲರ್ ಸ್ಟಿಲ್ ಎಂದು ಹೆಸರು.  ಇವುಗಳಲ್ಲಿ ಎರಡು ಬಗೆಗಳಿವೆ-ಒಂದು ತೆರೆದ ಮಾರ್ಗದ ಭಟ್ಟಿಯಂತ್ರ (ಓಪನ್ ಪಾತ್ ಸ್ಟಿಲ್) ಮತ್ತೊಂದು ಹ್ರಸ್ವ ಮಾರ್ಗದ ಭಟ್ಟಿಯಂತ್ರ (ಷಾರ್ಟ್ ಪಾತ್ ಸ್ಟಿಲ್).  ಸಾಮಾನ್ಯವಾಗಿ ತೆರೆದ ಮಾರ್ಗದ ಸಲಕರಣೆ ದೀರ್ಘಮಾರ್ಗದ್ದಾಗಿದ್ದು ಹ್ರಸ್ವಮಾರ್ಗದ್ದನ್ನೂ ಒಳಗೊಂಡಿರುತ್ತದೆ.  ಇವುಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಒಂದು ಸಲಕರಣೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. 

ಚಿತ್ರ-1

	
ಬಹಳ ಉಪಯುಕ್ತವಾದ ಈ ಯಂತ್ರ ಪ್ರಯೋಗಶಾಲೆಯಲ್ಲಿ ನಿತ್ಯಬಳಕೆಯಲ್ಲಿದೆ.  ಈ ಸಲಕರಣೆಯಲ್ಲಿ ಸಾಂದ್ರಕವನ್ನು  ಭಟ್ಟಿಇಳಿಸಬೇಕಾದ ದ್ರವದ ಸಮೀಪದಲ್ಲಿ ಇಡಲಾಗುತ್ತದೆ.  ದ್ರವೀಕರಿಸುವ ಮೇಲ್ಮೈಗೂ ಭಟ್ಟಿಇಳಿಸಬೇಕಾದ ದ್ರವಕ್ಕೂ ನಡುವಣ ಅಂತರ ಕಡಿಮೆಯಾದಂತೆ ಭಟ್ಟಿಯಂತ್ರದ ದಕ್ಷತೆ ಹೆಚ್ಚುತ್ತದೆ.  ಈ ರೀತಿ ಮಾಡುವುದರಿಂದ ಅಣುಭಟ್ಟಿ ಇಳಿಸುವ ವೇಗ ಹೆಚ್ಚಾಗಿ ಕನಿಷ್ಠಪಕ್ಷ 90%ರಷ್ಟು ಅಣುಗಳನ್ನು ಅವು ನಿರ್ಗಮಿಸುವ ಮೊದಲೇ ದ್ರವೀಕರಿಸಬಹುದು. 
	
ಸ್ಥಿರವಲ್ಲದ ಅನೇಕ ಸಂಯುಕ್ತವಸ್ತುಗಳನ್ನು ಅವುಗಳ ರಚನೆಗೆ ಸ್ವಲ್ಪವೂ ಧಕ್ಕೆ ಬಾರದಂತೆ ಈ ಭಟ್ಟಿಯಂತ್ರದಲ್ಲಿ ಕಾಯಿಸಬಹುದು.  ಆದರೆ, ಇತರ ಅಣುಭಟ್ಟಿ ಯಂತ್ರಗಳಲ್ಲಿ ಅವು ತಮ್ಮ ಸ್ವರೂಪವನ್ನು ಕಳೆದುಕೊಳ್ಳಬಹುದು ಇಲ್ಲವೇ ಆಸ್ಫೋಟನೆ ಹೊಂದಬಹುದು. 
	
ಅಣುಭಟ್ಟಿ ಇಳಿಸುವ ಈ ವಿಧಾನವನ್ನು ಕಡಿಮೆ ಬಾಷ್ಪಶೀಲ (ಲೋ ವೊಲಟೈಲ್) ಸಂಯುಕ್ತವಸ್ತುಗಳನ್ನು ಶುದ್ಧೀಕರಿಸಲು ಇಲ್ಲವೇ ಪೂರ್ವಭಾವಿಯಾಗಿ ಬೇರ್ಪಡಿಸಲು ಬಳಸಿಕೊಳ್ಳಬಹುದು. ಕಡಿಮೆ ಬಾಷ್ಪಶೀಲ ಅಂದರೆ ಪದಾರ್ಥವೊಂದು ಸಾಧಾರಣ ಉಷ್ಣತೆಗಳಲ್ಲಿಯೇ ಬೇಗ ಆವಿಯಾಗುವ ಗುಣ. ಉದಾಹರಣೆಗಾಗಿ, ಎ ಅನ್ನಾಂಗ ಮತ್ತು ಬಿ ಅನ್ನಾಂಗಗಳೆಂಬ ಸೂಕ್ಷ್ಮ ಸಂಯುಕ್ತವಸ್ತುಗಳನ್ನು ಮೀನೆಣ್ಣೆ ಮತ್ತು ಸಸ್ಯಸಂಬಂಧವಾದ ಎಣ್ಣೆಗಳಿಂದ ಅನುಕ್ರಮವಾಗಿ ಬೇರ್ಪಡಿಸಲು ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
(ಎಂ.ಪಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ